ಅನುಭೂತಿ

ವೇದಾಂತದಲ್ಲಿ ವಿಶೇಷವಾಗಿ ಅನುಭವಕ್ಕೆ ಪರ್ಯಾಯವಾಗಿ ಬಳಸುವ ಮಾತು. ಈ ಮಾತಿನಲ್ಲಿ ನೇರವಾದ, ಪ್ರತ್ಯಕ್ಷಸಿದ್ಧವಾದ, ಸಾಕ್ಷಾತ್ತಾದ ಅನುಭವಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬ್ರಹ್ಮಜ್ಞಾನದಿಂದ ಬ್ರಹ್ಮಪ್ರಾಪ್ತಿಯಾಗುತ್ತದೆ. ಎನ್ನುವುದು ವೇದಾಂತದ ಕಲ್ಪನೆ (ಬ್ರಹ್ಮವಿದ್ ಬ್ರಹ್ಮ ಏವ ಭವತಿ). ಜ್ಞಾನದ ಆವಿರ್ಭಾವ ಮತ್ತು ಅವಿದ್ಯಾಂಧಕಾರದ ಅಸ್ತಂಗಮ ಎರಡೂ ಏಕಕಾಲಿಕವಾದವು. ಈ ನೆಲೆಯಲ್ಲಿ ಸಚ್ಛಾಸ್ತ್ರದ ಅಧ್ಯಯನದಿಂದಲೂ ನಿದಿಧ್ಯಾಸದಿಂದಲೂ ಮಹಾವಾಕ್ಯಗಳ ಅನುಷ್ಠಾನದಿಂದಲೂ ಔಪಾಸನೆಯಿಂದಲೂ ಧ್ಯಾನದಿಂದಲೂ ಪರತತ್ತ್ವದ ಸಾಕ್ಷಾತ್ಕಾರವಾಗುತ್ತದೆ; ಕೇವಲ ಜ್ಞಾನದಿಂದಲೇ ಮುಕ್ತಿಬಾರದು ಎನ್ನುವ ದ್ವೈತದರ್ಶನದಲ್ಲಿ ಕೂಡ ಜ್ಞಾನದ ಆಧಿಕ್ಯವನ್ನು ಒಪ್ಪಿಕೊಂಡಿದ್ದಾರೆ. ಬ್ರಹ್ಮನ ಸ್ವರೂಪ ಅನಿರ್ವಾಚ್ಯವೆಂದೂ ಮುಕ್ತಿಸುಖ ಅನುಭವದಿಂದಲೇ ವೇದ್ಯವಾಗುವುದೆಂದೂ ಹೇಳುತ್ತಾರಷ್ಟೆ. ಹೀಗೆ ಅದ್ವೈತಾನುಭವಕ್ಕೆ ನೆರವಾಗುವ ಸಾಧನವನ್ನು ಅನುಭೂತಿ ಎಂದು ವ್ಯವಹರಿಸಿದ್ದಾರೆ. ವಿದ್ಯಾರಣ್ಯಸ್ವಾಮಿಗಳ ಅನುಭೂತಿಪ್ರಕಾಶದಲ್ಲಿ ಇದೇ ಅರ್ಥವನ್ನು ಕಾಣಬಹುದು. ಯಥಾರ್ಥಾನುಭವವಾದ ಅನುಭವವೇ ಅನುಭೂತಿಯೆಂದು ಒಂದು ಮತ. (ಅನುಮಿತಿ, ಉಪಮಿತ, ಶಾಬ್ದ, ಇವು ಯಥಾರ್ಥಾನುಭವದಲ್ಲಿ ಸೇರುತ್ತವೆಯೇ ಎಂಬ ಒಂದು ಶಂಕೆಯಂಟು. ನೈಯಾಯಿಕರು ನಾಲ್ಕು ವಿಧವಾದ ಜ್ಞಾನವನ್ನೂ ವೇದಾಂತಿಗಳು, ವಿiÁಮಾಂಸಕರು ಈ ನಾಲ್ಕಕ್ಕೆ ಅರ್ಥಾಪತ್ತಿ ಮತ್ತು ಅನುಪಲಬ್ಧಿ ಎರಡನ್ನೂ ಗ್ರಹಿಸಿದ್ದಾರೆ. ಇಷ್ಟೂ ಅನುಭೂತಿಯಲ್ಲೇ ಸೇರುತ್ತವೆ).								
  
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ